ಧನುರ್ಮಾಸ
		ಹನ್ನೆರಡು ಸೌರಮಾಸಗಳಲ್ಲಿ ಒಂಬತ್ತನೆಯದು; ಸೂರ್ಯ ಮೂಲಾನಕ್ಷತ್ರಕ್ಕೆ ಬಂದಾಗ ಈ ಮಾಸ ಪ್ರಾರಂಭವಾಗಿ ಉತ್ತರಾಷಾಢ ಎರಡನೆಯ ಪಾದಕ್ಕೆ ಪ್ರವೇಶಿಸಿದಾಗ ಮುಗಿಯುತ್ತದೆ. 241ನೆಯ ಅಂಶದಿಂದ 270ನೆಯ ಅಂಶ ಪೂರ್ತಿ ಸೂರ್ಯ ಸಂಚರಿಸುವ ಕಾಲವೇ ಈ ಮಾಸದ ಅವಧಿ.  ಈ ಮಾಸ ಮುಗಿದ ಮಾರನೆಯ ದಿನದಿಂದ ಉತ್ತರಾಯಣ ಪ್ರಾರಂಭ ಎಂದರೆ ಇದು ದಕ್ಷಿಣಾಯನದಲ್ಲಿ ಕೊನೆಯ ತಿಂಗಳು.  ಈ ಮಾಸಕ್ಕೆ ಸೇರಿದಂತೆ ಅಧಿಕಮಾಸ ಯಾವಾಗಲೂ ಬರುವುದಿಲ್ಲ. ಈ ತಿಂಗಳಿನಲ್ಲಿ ಪ್ರತಿನಿತ್ಯವೂ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು ದೇವತಾಪೂಜೆ ಮುಗಿದಿರುತ್ತದೆ. ಹೀಗೆ ಉಷಃಕಾಲದಲ್ಲಿ ಮಾಡಿದ ಈ ಪೂಜೆ ಅನಂತಪುಣ್ಯಫಲಪ್ರದವೆಂದು ನಂಬಿಕೆ. ಭಕ್ತಾಗ್ರೇಸರೆಯಾದ ಆಂಡಾಳ್ ಹಾಡಿರುವ ತಿರುಪ್ಪಾವೈನ  ಮೂವತ್ತು ತಮಿಳು ಪದ್ಯಗಳನ್ನು ಶ್ರೀವೈಷ್ಣವ ಸಂಪ್ರದಾಯಕ್ಕೆ ಸೇರಿದವರು ದಿನಕ್ಕೆ ಒಂದೊಂದು ಪದ್ಯದಂತೆ ಈ ತಿಂಗಳು ಪೂರ್ತಿ ಹಾಡಿ ಭಗವಂತನನ್ನು ಪೂಜಿಸುತ್ತಾರೆ.  ಈ ಕೃತಿಯ ಅಂತರಾರ್ಥವನ್ನು ತಿಳಿಸುವ ಉಪನ್ಯಾಸ ಗೋಷ್ಟಿಗಳು ನಡೆಯುತ್ತವೆ. ಈ ತಿಂಗಳಿನಲ್ಲಿ ದ್ರಾವಿಡ ವೇದವನ್ನು (ತಿರುವಾಯ್ಮೊ¿Â) ಶ್ರೀವೈಷ್ಣವರು ಪಠಿಸುವುದಿಲ್ಲ. ಈ ತಿಂಗಳಿನ ದಿವಸಗಳು ಅನಧ್ಯಾಯ ದಿನಗಳು. ಪ್ರತಿನಿತ್ಯವೂ ಹುಗ್ಗಿ ಶುಂಠಿ ಬೆಲ್ಲವನ್ನು ದೇವರಿಗೆ ನಿವೇದನೆ ಮಾಡುತ್ತಾರೆ.  ಈ ತಿಂಗಳಿನ ಕೊನೆಯ ಹತ್ತು ದಿನಗಳಲ್ಲಿ ಕೊಠಾರದಲ್ಲಿ ದೇವರು ಉತ್ಸವವನ್ನು ಮಾಡುತ್ತಾರೆ. ಇದಕ್ಕೆ ಕೊಠಾರೋತ್ಸವ ಎಂದು ಹೆಸರು. ಈ ತಿಂಗಳಿನ ಎಲ್ಲ ದಿವಸಗಳ ಬೆಳಗಿನ ಜಾವಗಳಲ್ಲಿ ಎಲ್ಲ ಹಿಂದೂಗಳಲ್ಲೂ ಮಕ್ಕಳಾದಿಯಾಗಿ ಎಲ್ಲರೂ ಎದ್ದು ಸ್ನಾನ ಮಾಡಿ ಭಜನೆ ಮತ್ತು ಪೂಜೆಗಳಲ್ಲಿ ಭಾಗವಹಿಸುತ್ತಾರೆ.
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ